ಸಮಸ್ಯೆ

 

                                               ತಾತನಿಗೆ ಮಹಾರಾಜರ ಖಜಾನೆಯ ಬಗ್ಗೆ ಬಹಳ ಮಾಹಿತಿ ಇತ್ತಂತೆ. ಮಹಾರಾಜರನ್ನು ಬಹಳ ಹತ್ತಿರದಿಂದ ಬಲ್ಲವರವರು. ರಾಜರ ವಿತ್ತ ವ್ಯವಹಾರಗಳನ್ನು ಹಲವು ವರ್ಷಗಳಿಂದ ನೋಡಿಕೊಂಡಿದ್ದವರವರು. ಬ್ರಿಟಿಷರಿಗೆ ಎಷ್ಟೇ ಸುಂಕ ನೀಡಿದರೂ ಮಹಾರಾಜರ ಆಸ್ತಿ ಮತ್ತು ವ್ಯವಹಾರದಲ್ಲಿ ಕಿಂಚಿತ್ತೂ ಕುಗ್ಗಿರಲಿಲ್ಲವಂತೆ. ಅದು ಹೇಗೆ ಸಂಭಾಳಿಸುತ್ತಿದ್ದರು ಎಂದು ರಾಜನಿಗೆ ಮತ್ತು ತಾತಾನಿಗೆ ಮಾತ್ರ ತಿಳಿದಿತ್ತೆಂದು ಹೇಳುತ್ತಾರೆ. ಕಾಗದದ ಚಿತ್ರಗಳು ಅಂಥದೇನನ್ನು ಹೇಳಲಾರದಲ್ಲವೇ ? ರಾಜ ವಂಶಸ್ಥರು ಹಿಂದಿನ ವಾರ ಮನೆಗೆ ಬಂದು ಹೋಗಿದ್ದರು. ಏನಾದರು ಸುಳಿವು ಸಿಕ್ಕರೆ ನಮ್ಮನ್ನು ಮರೆಯದಿರಿ ಎಂದು ಹೇಳಿ ಹೋಗಿದ್ದರು. ನಾನು ಕಾಗದದ ಫೋಟೋ ಕಾಪಿ ನೀಡಲು ನಿರಾಕರಿಸಿದೆ. ಅದರಲ್ಲಿ ಅಂಥದ್ದು ಏನು ಇಲ್ಲ , ಮನೆತನದ ಚಿತ್ರಗವು ಎಂದು ತಿಳಿಸಿದೆ, ಈಗ ಎಂತಾ ರಾಜ ಮನೆತನ ? ಅರಮನೆಯ ನಿಶಾನೆಗಳ್ಳನ್ನು ರೆಸಾರ್ಟ್ ಮಾಡಿ ಬದುಕುತ್ತಿರುವವರಷ್ಟೇ. ರಾಜ ವಂಶಸ್ತರೆಂದು ಅವರೇ ಹೇಳಿಕೊಂಡರೂ ಕೇಳುವವರಿಲ್ಲ. ನನಗೆ ಸಿಕ್ಕ ಕಾಗದ ಮತ್ತು ಅದರ ಚಿತ್ರಗಳು ಊರೆಲ್ಲ ಸುದ್ದಿಯಾಗಿದೆ. ಕೆಲಸಕ್ಕೆ ಬರುವ ಸತೀಶನೂ ಕೇಳಿ ಆಯಿತು. "ಅಣ್ಣ , ತೋಟದ ಮದ್ಯೆ ನನಗೆ ಯಾವಾಗಲು ಒಂದು ಆಯಸಕಾಂತದ ಶಕ್ತಿ ಎಳೆದ ಹಾಗೆ ಆಗುತ್ತದೆ., ಒಮ್ಮೆ ಅಲ್ಲಿ ಗುಂಡಿ ತೋಡಿ ನೋಡುವನಾ ?" , ಅಪ್ಪನ ಕಾಲದಲ್ಲಿ ಮಾಡಿದ ತೋಟ ಅದು , ಆಗ ನನಗೆ ಹದಿನಾರು ವಯಸ್ಸು. ಸಣ್ಣ ಗುಡ್ಡ ಸಮ ಮಾಡಿ ಮಾಡಿದ್ದು. ಚಿತ್ರಕ್ಕೂ ,ಇವ ಹೇಳಿದಕ್ಕೂ ಏನೂ ಸಂಬಂಧವಿಲ್ಲಾ. ಚಿತ್ರ ಹಾಗು ಕಾಗದ ನೋಡಿದವರೆಲ್ಲ ತಮ್ಮದೇ ಕಥೆ ಬಿಂಬಿಸಿ ಊರಿನ ಚರ್ಚೆಗಳಲ್ಲಿ , ಮಾತುಗಳಲ್ಲಿ ತೇಲಿಸುತ್ತಿದ್ದಾರೆ .

                                             ನನ್ನ ಎರಡನೇ ಮಗ ಎರಡು ಸಾರಿ ಬಂದು ಹೋದ. ಕಾಗದಗಳನ್ನು ಅದೆಷ್ಟು ಬಾರಿ ನೋಡಿದನೋ ಏನೋ. ಅವನ ಊಹೆಗಳನ್ನು ಕೇಳುವ ವಿವೇಚನೆ ನನಗಿಲ್ಲ. ಪೂರ್ವ ಪರ ಯೋಚಿಸದೆ ತನ್ನದೇ ವಾದ ಮಂಡಿಸುವ ಬುದ್ದಿ ಅವನದು. ಇದು ಬಾಹ್ಯಾಕಾಶ ಜೀವಿಗಳ ನೌಕೆಯಂತಿದೆ ಎಂದೂ ಒಮ್ಮೆ ಹೇಳಿರುತ್ತಾನೆ. ನನ್ನ ಹೆಂಡತಿ ಇದ್ದಿದ್ದರೆ ಸಮಸ್ಯೆ ಇರುತ್ತಿರಲಿಲ್ಲ. ಒಂದಾ ಸಮಸ್ಯೆಗೆ ಸಮಾಧಾನ ಹೇಳುತ್ತಿದ್ದಳು  ಅಥವಾ ಸಮಸ್ಯೆಯನ್ನು ನಿಷ್ಠುರವಾಗಿ ತಳ್ಳಿ ಹಾಕುತ್ತಿದ್ದಳು. ಯಾವುದೇ ವಿಷಯವನ್ನು ಯೋಚಿಸಿ ಕಾಲ ಕಳೆಯುವುದಾಗಲಿ ಚಿಂತಿಸುವುದಾಗಲಿ ಅಥವಾ ಹಿಗ್ಗುವುದಾಗಲಿ ಅವಳ ಜಾಯಾಮಾನವಲ್ಲ. ನನಗೆನೂ ಇವು ನಿಧಿಯ ಕಾಗದ ಚಿತ್ರಗಳೆಂದು ನಂಬಿಕೆಯಿಲ್ಲ. ಹಾಗಿದ್ದರೆ ತಂದೆಯವರು ಬಗ್ಗೆ ತಲೆ ಕೆಡಿಸಿಕೊಳ್ಳದೆ ಇರುತ್ತಿರಲಿಲ್ಲ. ಅವರಿಗೆ ಮನೆಯ ಪ್ರತಿ ಮೂಲೆಯ ಪರಿಚಯವಿತ್ತು. ಎಲ್ಲ ಕೋಣೆಗಳು ಉಪಯೋಗದಲ್ಲಿ ಇದ್ದವು. ಹಬ್ಬ ಸಮಾರಂಭಗಳು ಜೋರಾಗೇ ನಡೆಯುತ್ತಿದ್ದವು. ತಾತನ ಕಾಲದ ಗತ್ತು ಕೆಲ ಮಟ್ಟಿಗೆ ತಂದೆಯೂ ನಡೆಸುತ್ತಿದ್ದರು. ಬಂಧುಗಳು ತುಂಬಿ ಸೇರುತ್ತಿದ್ದರು . ನನ್ನ ಮನೆ ಸುಮಾರು ನೂರು ವರುಷ ಹಳೆಯ ಮನೆ. ಮುತ್ತಾತ ತಮ್ಮ ಇಳಿ ವಯಸ್ಸಿನಲ್ಲಿದ್ದಾಗ , ನನ್ನ ತಾತ ಕಟ್ಟಿದ ಮನೆ. ಮಹಾರಾಜರಿಗೆ ತೀರಾ ಹತ್ತಿರದ ಸ್ನೇಹವಿದ್ದುದರಿಂದ ಬೊಕ್ಕಸದ ಹಣದಿಂದ ಕಟ್ಟಿದೆಂದು ಜನ ಹೇಳುತ್ತಾರೆ, ತಾತ ತಾನು ಮತ್ತು ತನ್ನ ತಂದೆ ದುಡಿದು ಕಟ್ಟಿದೆಂದು ಹೇಳುತ್ತಾರೆ . ಊರಿನ ಹೊರಭಾಗದಲ್ಲಿ ಶಿವನ ದೇವಸ್ಥಾನದ ೪೫೦ ಮೀಟರ್ ದೂರದಲ್ಲಿ ನಮ್ಮ ಮನೆ. ಎಷ್ಟು ದೊಡ್ಡದೆಂದು  ನನಗೆ ವಿವರಿಸಲಾಗದು. ಕಡಿಮೆಯೆಂದರೆ ನೂರು ಜನರನ್ನು ಸಂಭಾಳಿಸಬಹುದು, ಈಗ ಮಾತ್ರ ನಾನು ಮತ್ತು ನನ್ನ ಸಣ್ಣ ಮಗನ ಸಂಸಾರ, ಅವನು ಅವನ್ಹೆಂಡತಿ , ೧೫ ವರ್ಷದ ಮಗ. ಎರಡನೇ ಮಗ ಪಕ್ಕದ ಊರಿನಲ್ಲಿದ್ದಾನೆ. ಆಗಾಗ್ಗೆ ಬಂದು ಹೋಗುತ್ತಾನೆ . ಮೊದಲನೆಯವನದು ಬೆಂಗಳೂರಿನಲ್ಲೆ ಬಿಡಾರ. ಅವನು ತಾತನ ಕೆಲವು ಪುಸ್ತಕಗಳು ಬೇಕೆಂದು ಕೇಳಿದ್ದ. ಅವುಗಳನ್ನು ಹಳೆಯ ಪೆಟ್ಟಿಗೆಯಲ್ಲಿ ಹುಡುಕಲು ಹೋದಾಗ ಸಿಕ್ಕ ಹಳೆಯ ಕಾಗದಗಳಿವು. ದಿನಾಂಕ ಬರೆದಿಲ್ಲ ಆದರೆ ತಾತನ ಸಹಿ ಇದೆ. ನಕ್ಷೆಯಂತೆ ಕಾಣುತ್ತದೆ. ಅಂಕು ಡೊಂಕು ದಾರಿ ನಕ್ಷೆಯಲ್ಲ. ಚೌಕ ತ್ರಿಕೋಣಗಳಿವೆ. ನನಗೇನು ತಿಳಿಯೋಲ್ಲ. ಮಂಡಲದಂತೆ ಕಾಣುತ್ತದೆ. ಹೆದರಿ ಜ್ಯೋತಿಷಿಗಳ ಬಳಿಯೂ ಹೋಗಿ ಬಂದೆ. ಅವರು ಕವಡೆ ಹಾಕಿ ನೋಡಿದರು. ಕುಲದೇವರು ನಕ್ಷೆಯಲ್ಲಿರಬಹುದು , ನಿಮ್ಮ ಪೂರ್ವಜರು ಉತ್ತರಕ್ಕೆ ಹೋಗುತ್ತಿದ್ದರು, ನೀವು ಒಮ್ಮೆ ಹೋಗಿ ಬನ್ನಿ ಎಂದರು. ಅಪ್ಪ ಆಗಾಗ್ಗೆ ಕಾರವಾರದ ಬಳಿ ಯಾವುದೂ ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದರಂತೆ. ತಿಳಿದು ಹೋಗಿ ಬರುವ ಸಂಕಲ್ಪ ಮಾಡಿದ್ದಾಯ್ತು. ಅಪ್ಪನ ಪರಿಚಯವಿದ್ದ ಅರ್ಚಕರೊಬ್ಬರು ಇವು ದೇವರ ರೂಪವಿರುವ ಚಿತ್ರ, ಪೂಜೆ ಮಾಡಿ ಎಂದರು. ನಾನು ಬದುಕಿರುವ ತನಕ ಚಿತ್ರಗಳಿಗೆ  ಯಾವ ಯಾವ  ಪ್ರಶ್ನೆಗಳು , ರೂಪಗಳು, ಸಮಸ್ಯೆಗಳು .ಬರುವುದೋ ಅದಕ್ಕೆ ಯಾವ ಪರಿಹಾರ ಕಾಣುವೇನೂ ನೋಡುವ .

                                                      ನಾಳೆ ಬೆಂಗಳೂರಿಗೆ ಹೋಗುವುದಿದೆ ಮೊದಲನೆಯವನು ಏನು ಹೇಳುತ್ತಾನೋ ನೋಡುವ. ಅವನ ಮಾತುಗಳು ಬಹಳ ತೂಕದ್ದು. ತನ್ನ ತಾಯಿಯ ತಿಳುವಳಿಕೆ , ಕಾಗದಗಳನ್ನೂ ಫೈಲ್ನಲ್ಲಿ ಇರಿಸಿ ಒಂದು ಬ್ಯಾಗ್ನಲ್ಲಿ ಜೋಪಾನ ಮಾಡಿದ್ದಾಯ್ತು . ಮೂರು ದಿನದ ಬೆಂಗಳೂರಿನ ಬಿಡಾರಕ್ಕೆ ತಯಾರಿಯಾಯ್ತು. ರಾತ್ರಿ ಸಂಚಾರದ ಬಸ್ಸು. ಸ್ವಲ್ಪ ನಿದ್ರೆಗೆ ಜಾರಿದೆ . ಕನಸಿನ್ನಲ್ಲಿ ಕಾಗದ ಚಿತ್ರಗಳು ಎದ್ದು ಕಾಣುತಿದ್ದವು. ದೇವರೇ ಚಿತ್ರಗಳಿಂದ ಪ್ರತ್ಯಕ್ಷವಾದಂತೆ , ಹಣದ ಕೊಪ್ಪರಿಗೆ ಬಳಿ ಬಂದಂತೆ, ಎರಡನೇ ಮಗನ ಬಾಹ್ಯಾಕಾಶದ ನೌಕೆಯಂತೆ , ಚಿತ್ರಗಳು ಚಕ್ರವ್ಯೂಹವಾದಂತೆ ತಾನು ಅದರೊಳಗೆ ಸಿಲುಕಿದಂತೆ.

                                                      ಮಗ ಬಸ್ಸು ನಿಲ್ದಾಣದಲ್ಲಿ ಕಾಯುತ್ತಿದ್ದ. ಮನೆಗೆ ಹೋಗಿ ತಿಂಡಿ ತಿಂದಾದ ಮೇಲೆ ಸೊಸೆ ನಿಮಗೆ ಪ್ರಯಾಣದ ಆಯಾಸ ಇರಬಹುದು , ಸ್ವಲ್ಪ ಹೋಗಿ ಮಲಗಿ ಎಂದಳು. ಮೊಮ್ಮಗ ಆರ್ಕಿಟೆಕ್ಚರ್ ಎಂಜಿನೀರಿಂಗ್ನಲ್ಲಿ ಫೈನಲ್ ಇಯರ್ ಓದುತ್ತಿದ್ದ. ನನಗೆ ತನ್ನ ಕೋಣೆಯ ಇನ್ನೊಂದು ಹಾಸಿಗೆಯನ್ನು ತಯಾರಿಸಿ ಕಾಲೇಜುಗೆ ಹೊರಟು  ಹೋದ. ನಾನು ಆಯಾಸದಿಂದ ಮಂಪರು ನಿದ್ರೆಗೆ ಜಾರಿದೆ. ಕೆಲ ಕಾಲ ನಿದ್ರಿಸಿ ಎದ್ದು ಬಾಯಾರಿಕೆಯೆಂದು ನೀರು ಕುಡಿಯಲು ಮೊಮ್ಮಗನ ಟೇಬಲ್ ಮೇಲಿರುವ ಬಾಟಲಿ ಎತ್ತಿಕೊಂಡೆ , ಆಶ್ಚರ್ಯ !!!!!!!!!!! ಅದೇ ಚಿತ್ರಗಳಿವು. ಕಾಲೊಮ್ಮೆ ನಡುಗಿತು. ಚಿತ್ರಗಳು ನನಗೆ ಸಿಕ್ಕಿರುವ ಕಾಗದದಲ್ಲಿನ ಚಿತ್ರಗಳು. ಅವು ಇಲ್ಲಿಗೆ ಹೇಗೆ ಬಂದವು. ಬೆಳಗ್ಗೆ ಮೊದಲ ಮಗನಿಗೆ  ಚಿತ್ರಗಳನ್ನು ತೋರಿಸಲು ಹೋದಾಗ ನನಗೆ ಆಸಕ್ತಿ ಇಲ್ಲ, ಇವುಗಳ ಬಗ್ಗೆ ನೀವೂ ತಲೆ ಕೆಡಿಸಿಕೊಳ್ಳಬೇಡಿ ಎಂದಿದ್ದ. ಅವನು ಅವುಗಳನ್ನು ನೋಡಿಯೂ ಇರಲಿಲ್ಲ. ಚಿತ್ರದ ಕೆಳಗೆ ನನ್ನ ಮೊಮ್ಮಗನ ಬರಹವಿದೆ. ನನ್ನ ತಾತನೇನಾದರೂ ಮೊಮ್ಮಗನ ಮೂಲಕ ನನಗೆ ಸಂದೇಶವಿತ್ತುತ್ತಿದ್ದಾರೆಯೇ ? ನೋಡಲೂ ಸಹ ಅವರ ಪ್ರತಿ ರೂಪ ಇವನು. ಅಥವಾ ಇದೇನಾದರೂ ನನ್ನ ರಾತ್ರಿ ಕನಸಿನ ಮುಂದುವರಿದ ಭಾಗವೇ ? ಸಣ್ಣಗೆ ಬೆವರಿ ಹೋಗಿದ್ದೆ. ಸೊಸೆಯನ್ನು ಕರೆದು ಚಿತ್ರವೆಂದು ಕೇಳಿದೆ. ಅವಳು ನಗುತ್ತ "ಮಾವ , ಇವು ಮಗನ ಸೆಮಿಸ್ಟರ್ ಪ್ರೊಜೆಟ್. ಅವನು ಕಳೆದ ಸಲ ಊರಿಗೆ ಬಂದಾಗ , ಹಳೆಯ ಮನೆಯ ಪೂರ್ತಿ ಸುತ್ತಿ , ಅಧ್ಯಯನ ಮಾಡಿ, ಅದರ ಟಾಪ್ ವೀವ್ ನಕ್ಷೆ ಬಿಡಿಸಿದ್ದಾನೆ" . ಅವಳಿಗೆ ನನ್ನಬಳಿ ಇರುವ ಕಾಗದಗಳ ಬಗ್ಗೆ ಹೇಳಲಿಲ್ಲ. ಸಂಜೆ ಮಗನ ಬಳಿ ಹೇಳಿ ಹೊಟ್ಟೆ ಪೂರ್ತಿ ನಕ್ಕಾಯ್ತು. ಎರಡನೇ ಮಗನಿಗೆ ಒಂದು ಮೆಸೇಜ್ ಕಳಿಸಿದೆ. ಅವನು ತಾನು ಸಮರ್ಥಿಸಿದ ಸಾವಿರಾರು ಆಲೋಚನೆಗಳು ವ್ಯರ್ಥವಾಯಿತೆನ್ನುವ ಬೇಸರಕ್ಕೆ ರಿಪ್ಲೈ ಕೂಡ ಮಾಡಲಿಲ್ಲ. ರಾಜ ಮನೆತನದವರು ಕೊಪ್ಪರಿಗೆ ಸಿಕ್ಕರೆ ರೆಸಾರ್ಟ್ ಉನ್ನಿತಿಕರಿಸಬೇಕೆಂದುಕೊಂಡಿದ್ದರು. ಅವರಿಗೆ ವಿಷಯ ತಿಳಿಸಿಬೇಕೆಂದುಕೊಂಡೆ. ಕ್ಲಿಷ್ಟ ಸಮಸ್ಯೆ ಹಾಸ್ಯವಾಗಿ ಹೊಯ್ತು. ಮನಸ್ಸು ನಿರಾಳವಾಯ್ತು,   

Comments

Popular posts from this blog

ಹುಡುಕಾಟ

ಅಸ್ಥಿತ್ವ