ಅಸ್ಥಿತ್ವ


“ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲುಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಪ್ರೇಮಗಳ ಗುರುತಿಸದಾದೆನು ನಮ್ಮೊಳಗೇ “
                           ದೇವಾಲಯದಲ್ಲಿ ಪೂಜೆ ನಡೆಯುತ್ತಿತ್ತು. ಆಚಾರ್ಯರ ಮಂತ್ರ ಪಟನೆಯಾಗುತ್ತಿರಬೇಕಾದರೆ ಅವನ ಮನಸ್ಸೆಲ್ಲಾ ಜಿ.ಎಸ್.ಶಿವರುದ್ರಪ್ಪನವರ ಇದೇ ಹಾಡು ಗುನುಗುಡುತ್ತಿತ್ತು. ದೇವಸ್ಥಾನದ ಸುತ್ತ ೫೦ ಮೀಟರ್ ವರೆಗೂ ಗಂಟೆಯ ಸದ್ದು ಜೇ೦ಕರಿಸುತ್ತಾ ಯಂತ್ರಚಾಲಿತ ಡಮರುಗದ ಸದ್ದೂ ಸೇರಿ ಶಿವನೇ ವಿಶ್ವಸ್ವರೂಪ ಅವನ ಹೊರತು ಯಾರೂ ಇಲ್ಲ ಎಂಬಂತೆ ಹರಡಿತ್ತು. ವಾಹನಗಳ ಸದ್ದು, ಹಕ್ಕಿ ಪಕ್ಕಿ, ದನಕರುಗಳ ಕೂಗು, ಜನರ ಮಾತು ಕತೆ ಎಲ್ಲವೂ ಈ ಜೇ೦ಕಾರದ ಮುಂದೆ ನಿಶಭ್ದವಾದಂತೆ ಗೋಚರಿಸಿತ್ತು. ಆಚಾರ್ಯರ ಮಂತ್ರದ ಏರಿಳಿತ , ಪುಟ್ಟ ಪುಟ್ಟ ದೀಪಗಳು , ಹೂವಿನ  ಅಲಂಕಾರದಿಂದ ,ಶಿವನೇ ದರ್ಶನ ಕರುಣಿಸಲು ಬಂದಿಳಿದಂತೆ ದೇವಾಲಯದಲ್ಲಿ ಜನಸ್ತೋಮ ಭಕ್ತಿಭಾವದಿಂದ ಕೈ ಮುಗಿದು ನಿಂತಿದ್ದರು. ಆದರೆ ಅವನು ಮಾತ್ರ ಮುಖದಲ್ಲಿ ಯಾವ ಭಕ್ತಿ ಭಾವನೆಯೂ ಇಲ್ಲದೆ , ಭಾವಹೀನನಾಗಿ ಒಂದೊಂದೇ ಆರತಿ ತಟ್ಟೆಯನ್ನು ಆಚಾರ್ಯರಿಗೆ ನೀಡುತಿದ್ದ. ಹಣೆಯಲ್ಲಿ ತಿಲಕವೂ ಇಲ್ಲ , ಕಾಟಾಚಾರಕ್ಕೆ ಪಂಚೆ ತೊಟ್ಟಿದ್ದ ಹಲವು ವರ್ಷಗಳಿಂದಲೂ ಉಪಕರ್ಮದ ಸಂಸ್ಕಾರವೇ ನಡೆಯದ ಜನಿವಾರ ಮೈಮೆಲಿತ್ತು ಪೂಜೆ ಮುಗಿದ ನಂತರ ಆರತಿಯನ್ನು ಜನರಿಗೆ ನೀಡತೊಡಗಿದ. ಕರ್ಪೂರದ ಬಿಸಿ ಆರತಿಯ ತುದಿಯನ್ನೂ ಸೇರಿತ್ತು. ಬಿಸಿಯ ಅರಿವೆ ಆಗಿಲ್ಲವೇನೋ ಎಂಬಂತೆ ಹಿಡಿದುಕೊಂಡಿದ್ದ. ಭಕ್ತಿಯಿಂದಲ್ಲ ಅಸಡ್ಡೆಯಿಂದ. ದೇವರ ಅಸ್ತಿತ್ವವನ್ನೇ ನಂಬದ ಈತನಿಗೆ ದೇವರ ಆರತಿ ನೀಡುವ ಕೆಲಸ ದೊರಕಿತ್ತು. ಎಲ್ಲರೂ ಇವನ ಬಳಿ ಬಂದು ಕರ್ಪೂರದ ಬೆಂಕಿಯನ್ನು ತಮ್ಮ ಕೈಗೆ ಮೆತ್ತಿಸಿಕೊಂಡು ಹಣೆಗೆ ಒರಸಿಕೊಳ್ಳುತ್ತಿದ್ದರು. ತಮ್ಮ ಬಾಳನ್ನು ಬೆಳಗುವ ಜ್ವಾಲೆ ಅದು ಎಂದು ಎಲ್ಲರ ನಂಬಿಕೆ. ಆದರೆ ಇವನಿಗೆ ಮಾತ್ರ ಯಾವುದೊ ಕಲ್ಲಿನ ಸುತ್ತ ಸುತ್ತಿ ಬಂದ ಬೆಂಕಿ ಅಷ್ಟೇ. ದೇವರ ಅಭಿಷೇಕದ ನೀರು ಕಲ್ಲಿಗೆ ಎರೆದ ನೀರಷ್ಟೇ .ಆದರೆ ಜನರ ನಂಬಿಕೆ ಹುಸಿಯೇ??ಅದು ಅವರಿಗೆ ಪವಿತ್ರ ಜಲವಷ್ಟೇ.ನಂಬಿಕೆ ದೇವರನ್ನು ಸೃಷ್ಟಿಸಬಲ್ಲುದು .ದೆವ್ವವನ್ನೂ ಊಹಿಸಬಲ್ಲುದು. 
"ಅವರವರ ಭಾವ ಅವರವರ ಭಕುತಿಗೆ ಅಲ್ಲವೇ".
                                      ಆತ ಮನೋಹರ್. ದೇವಾಲಯದಲ್ಲಿ ಕೆಲಸಕ್ಕೆ ಸೇರಿ ೫ ತಿಂಗಳಾಗಿತ್ತು. ದಿನೇ ದಿನೇ ಆ ವಾತಾವರಣದಲ್ಲಿ ಸೊರಗಿಹೋಗಿದ್ದ. ತನ್ನ ಭಾವನೆಗಳ ವಿರುದ್ದವಾಗಿ ಬದುಕುತ್ತಿದ್ದೇನೆ ಎಂಬ ಅಂಶ ಅವನ ಮನಸ್ಸನ್ನು ಸದಾ ಬೆಂಕಿಯ ಕಿಡಿಯಾಗಿಸಿತ್ತು . ಅತ್ತ ಹೊತ್ತಿ ಉರಿಯುವುದೂ ಇಲ್ಲ ,ಇತ್ತ ಆರುವುದೂ ಇಲ್ಲ. ಅವನನ್ನ ಒಂದು ತರ ಸುಡುತ್ತಿತ್ತು. ಬರ್ತಿ ಒಂದೂವರೆ ವರ್ಷಗಳ ಹಿಂದೆ ಅವನ ತಂದೆ ಇಹಲೋಕ ತ್ಯಜಿಸಿದ್ದರು. ಊರಿಗೆ ಊರೇ ಬಂದ ಖಾಯಿಲೆ ಇವನ ತಂದೆಯನ್ನೂ ಬಿಡಲ್ಲಿಲ್ಲ. ಹುಟ್ಟು ಪವಿತ್ರ ಬ್ರಾಹ್ಮಣ ಜನ್ಮದಲ್ಲಿ. ತಂದೆ ಮಕ್ಕಳದಿಬ್ಬರದೂ ದೇವರ ನಂಬಿಕೆಯನ್ನೇ ಮೀರಿದ ನಾಸ್ತಿಕ ಸಂಪ್ರದಾಯ. ತಂದೆ ಪುಟ್ಟ ಶಾಲೆಯಲ್ಲಿ ಗುಮಾಸ್ತನಾಗಿದ್ದ . ಧರ್ಮದ ತಿರುಳನ್ನೇ ಮರೆತು ಬರಿಯ ಟೊಳ್ಳು ನಂಬಿಕೆಯನ್ನೇ ಧರ್ಮವೆಂದು ನಂಬಿದ್ದ ಜನರ ಮಧ್ಯೆ ಬೆಳೆದು ದೇವರೆಂಬುದು ಬರಿಯ ಟೊಳ್ಳು ನಂಬಿಕೆ ಎಂಬ ಅಭಿಪ್ರಾಯ ಬೆಳೆಸಿಕೊಂಡಿದ್ದವನು. ತನ್ನ ಮಗನಿಗೂ ಅದನ್ನೇ ಧಾರೆಯೆರೆದನು .ಪುರೋಹಿತನ ಮಗಳಾದ ತಾಯಿ ,ತಂದೆ ಮಕ್ಕಳ ಮಾತುಗಳೆಲ್ಲವೂ ಸರಿಯೆಂದು ಕಂಡರೂ,ಅವರಷ್ಟು ಧೈರ್ಯ ಬಾರದೆ ಮನೆಯಲ್ಲಿ ದೇವರ ಕೋಣೆಯ ಕಾರ್ಯಗಳನ್ನು ನಿರ್ವಹಿಸುತ್ತಿದಳು. ಮಗನಿಗೆ ಉಪನಯನದ ಸಂಸ್ಕಾರವನ್ನೂ ಹಠ ಹಿಡಿದು ಮುಗಿಸಿದ್ದಳು. ಮನೋಹರ ದ್ವಿತೀಯ ಪಿ.ಯು.ಸಿ.ಯಲ್ಲಿದ್ದಾಗ ತಂದೆ ಮರಣ ಹೊಂದಿದ್ದರು. ದಾರಿ ಕಾಣದೆ ಬೆಂಗಳೂರಿನಲ್ಲಿದ್ದ ಚಿಕ್ಕಪ್ಪನ ಮನೆಯಲ್ಲಿ ಬಿ.ಎ. ಮಾಡಲು ಸೇರಿಕೊಂಡ. ತಂದೆಯಿಂದ ಬಳುವಳಿಯಾಗಿ ಬಂದ ಅತಿಯಾದ ಸ್ವಾಭಿಮಾನ ಚಿಕ್ಕಪ್ಪನ ಮನೆಯಲ್ಲಿ ಜಾಸ್ತಿ ದಿನ ಉಳಿಯಲು ಬಿಡಲ್ಲಿಲ್ಲ . ಪ್ರತಿ ಹೊತ್ತು ಭಿಕ್ಷೆ ಬೇಡಿ ತಿಂದಂತೆ ಭಾವವಾಗುತ್ತಿತ್ತು. ಮಾನವೀಯ ಮೌಲ್ಯಗಳು ಬದುಕಿಗೆ ಮುಳ್ಳಾಗಲೂಬಹುದಲ್ಲವೇ???? ಎರಡೇ ತಿಂಗಳಲ್ಲಿ ವಾಪಸಾದ .ತನ್ನ ಮಾವನ ಪೌರೋಹಿತ್ಯ ನಡೆಯುವ ದೇವಸ್ಥಾನದಲ್ಲಿ ಮಾವನ ಜೊತೆ ಕೆಲಸ ಮಾಡಲು ಅಜ್ಜನ ಆಜ್ನೆಯಾಯ್ತು . 
ದೇವರ ಮಹಿಮೆಯನ್ನೇ ನಂಬದ ಹುಡುಗ ದೇವಾಲಯದಲ್ಲಿ ಕೆಲಸ ಮಾಡಲು ಸಾದ್ಯವೇ????ವಿಧಿ ಮಾತ್ರ ಅತ್ತವೇ ಹೊರಳಿಸಿತು. ದೇವರ ಪೂಜೆಗೆ ಸಿದ್ಧತೆ ನಡೆಸುವುದು , ದೇವರ ಗರ್ಭ ಗುಡಿಯ ಸ್ವಚ್ಚತೆ, ದೇವಾಲಯದ ಕಛೇರಿಯಲ್ಲಿ ಸಹಾಯ, ತೀರ್ಥ  ಪ್ರಸಾದ ವಿತರಣೆ ಇಂತಹ ಕೆಲಸಗಳು ದೊರಕಿದ್ದವು. ಜನರ ನಂಬಿಕೆಗಳಿಗೆ ಮೋಸ ಮಾಡಿದಂತೆ ಈ ಕೆಲಸ, ಭಕ್ತಿ ಭಾವದಿಂದ ನಮಸ್ಕರಿಸಲು ಬಂದವರಿಗೆ ಈ ಕ್ರಿಯೆಗಳನ್ನೇ ನಂಬದ ವ್ಯಕ್ತಿ ದೇವರ ಪ್ರಸಾದವೆಂದು ನೀಡುವುದು ತಾನು ಮಾಡುತ್ತಿರುವ ಮೋಸ ಎಂದು ನಂಬಿದ್ದ. ಈ ಬಗ್ಗೆ ಮಾವನಲ್ಲೂ ಮಾತನಾಡಿದ್ದ . ಚಿಕ್ಕ ವಯಸ್ಸಿನಿಂದಲೂ ಪೌರೋಹಿತ್ಯವನ್ನೇ ಮಾಡುತ್ತಿದ್ದ ಇವರಿಗೆ ಈ ಬಗ್ಗೆ ಮಾತನಾಡುವ ಆಲೋಚನೆಯೇ ಇರಲ್ಲಿಲ್ಲ. ಇದಕ್ಕೆ ಏನೂ ಪರಿಹಾರ ಸೂಚಿಸಲಾಗದ ಸ್ಥಿತಿ ಅವರದು. ತನ್ನ ತಂದೆ ಮಾಡುತ್ತಿದ್ದ ಕೆಲಸವನ್ನೇ ತಾನೂ ಮಾಡುತ್ತಿದರು. ಮನೋಹರನ ಅಜ್ಜನಿಗೆ ತನ್ನ ಮಗನಿಗೆ ಗಂಡುಮಕ್ಕಳಿಲ್ಲದ ಕಾರಣ ಮನೋಹರನೇ ಮಗನ ನಂತರ ದೇವಾಲಯದ ಪೂಜೆ ಕಾರ್ಯಗಳನ್ನ ನಿರ್ವಹಿಸಬೇಕೆಂದಿತ್ತು, ಮನೋಹರನ ಈ ವಿಚಾರದ ಔದಾಸಿನ್ಯದಿಂದ ಸ್ವಲ್ಪ ಬೇಸರಗೊಂಡಿದ್ದರು.
                   ‘’ದೇವರು ಕೊಟ್ಟ ಹಣವನ್ನೂ ದೇವರಿಗೇ ಕಾಣಿಕೆಯಾಗಿ ಕೊಡುವುದು ಏನು ಸರಿ. ದೇವರು ಭಕ್ತರ ಪೂಜೆ ಕಾರ್ಯಗಳಿಗೆ ಪ್ರಸನ್ನನಾಗಿ ಕರುಣಿಸಲು ಅವನೇನು ನಮ್ಮಂತೆ ಸ್ವಾರ್ಥಿಯೇ. ದೇವರೇನೂ ದುಡ್ಡಿದ್ದವರ ಪರ,ಬಡವರ ವಿರೋಧಿಯೇ, ಏಕೆಂದರೆ ದುಡ್ಡಿದ್ದವರು ಪೂಜೆ ಪುನಸ್ಕಾರವೆಂದು ಮಾಡಿಸುತ್ತರಲ್ಲವೇ . ಮನುಷ್ಯ ದೇವರನ್ನು ತನ್ನ ಬುದ್ದಿಯ ರೂಪವೆಂದು ಭಾವಿಸಿದ್ದಾನಷ್ಟೇ . ಅವನ ಅಸ್ಥಿತ್ವವನ್ನು ತನಗೆ ಬೇಕಾದ ಹಾಗೆ ಬದಲಾಯಿಸಿಕೊಂಡಿದ್ದಾನೆ’’ 
ಎಂದು ತನ್ನಷ್ಟಕ್ಕೆ ಯೋಚಿಸುತ್ತ ಸಾಲಾಗಿ ಬಂದ ದೇವರ ಗ್ರಾಹಕರಿಗೆ ಗಂಧ ಪ್ರಸಾದವನ್ನು ನೀಡುತ್ತಿದ್ದನು. ಮಾವನಿಗೆ ಇವನ ಯಾವ ಭಾವನೆಗಳೂ ಅರ್ಥವಾಗುತ್ತಿರಲ್ಲಿಲ್ಲ. ಇವನದು ಬರಿಯ ಅಸಡ್ಡೆಯಷ್ಟೇ ಎಂದನ್ನುಕೊಳ್ಳುತ್ತಿದ್ದರು . 
ಸಾಲಲ್ಲಿ ಬಂದ ಪೋಸ್ಟ್ ಮ್ಯಾನ್ ಇವನ ಬಳಿ ಪ್ರಸಾದ ಸ್ವೀಕರಿಸಿ,ಪ್ರಸಾದದ ತಟ್ಟೆಯ ಬಳಿ ಒಂದು ಪೋಸ್ಟ್ ಕಾಗದವಿರಿಸಿ ಹೋದ. ಈಗ ತೆಗೆದು ನೋಡಿದರೆ ಮಾವನ ಮುಖ ಕೆಂಪಾದಿತು ಎಂದು ಹಾಗೆಯೇ ಬದಿಯಲ್ಲಿಟ್ಟ. ಬಿಡುವಾದಾಗ ಒಡೆದು ಓದಿದಾಗ ಮುಖ ಅರಳಿತು. ತನ್ನ ತಂದೆಯ ಸ್ನೇಹಿತರೊಬ್ಬರಲ್ಲಿ ಒಂದು ಕೆಲಸ ಕೊಡಿಸುವಂತೆ ಕೇಳಿದ್ದ. ಅವರು ಉತ್ತರ ಕಳುಹಿಸಿದ್ದರು. ತಮ್ಮ ಮುದ್ರಣಾಲಯದಲ್ಲಿ ಒಂದು ಕೆಲಸ ಕೊಡಿಸುವುದಾಗಿ ಹೇಳಿದ್ದರು.
“ಇದು ಇಷ್ಟು ದಿನ ದೇವರ ಸೇವೆಗೆ ಕರುಣಿಸಿದ ಫಲ”ಎಂದು ಮನಸ್ಸಿನ ಮೂಲೆಯಿಂದ ಕೊನೆಗೊಂದು ಸಂದೇಶ ಬಂತು.”

Comments

  1. nice one dude, the language and the hold on it are just awesome ! keep writing :)

    ReplyDelete
  2. God is an invention of man.. It was required so as to avoid men from wrongdoings.. But those who have self conscience may not need god.. It is as caring as your mother when you feel you are doing good.. And as sharp as a sword when u feel u are not..
    The story is good, talks about both these things..
    Praveen H o

    ReplyDelete
  3. ಧನ್ಯವಾದಗಳು ಆಶಿಕ್,ಕೃಷ್ಣ,ಪ್ರತಾಪ್,ಸುಬ್ರಮಣ್ಯ,ಪ್ರವೀಣ್.

    ReplyDelete
  4. ಕಾರಂತರು ಹೇಳಿದಂತೆ ಮನುಷ್ಯ ತನ್ನ ಮಾತುಗಳನ್ನೆಲ್ಲ ಸರಿಯೆಂದು ಎಲ್ಲರೂ ಪರಿಗಣಿಸಲು ಆ ಮಾತುಗಳನ್ನೆಲ್ಲಾ ದೇವರ ಬಾಯಿಗೆ ತುರುಕಿದ.

    ReplyDelete
  5. ಮನುಷ್ಯ ಮಾನಸಿಕವಾಗಿ ಅಥವಾ ಶಾರೀರಿಕವಾಗಿ ಅದೆಷ್ಟೇ ಹಿರಿಯನಾಗಿದ್ದರೂ ಏಕಾ೦ಗಿಯಾಗಿ ಏನನ್ಣೂ ಸಾಧಿಸಲಾರ....ಅವನಿಗೆ ಆಧಾರವಾಗಿ ಸ್ವಪ್ರಯತ್ನ ಆತ್ಮವಿಶ್ವಾಸ ಪರಿಶ್ರಮ ಮುಖ್ಯವಾಗಿ ತನ್ನ ಕೆಲಸದ ಮೇಲೆ ನ೦ಬಿಕೆ ಇರಲೇಬೇಕು... ಅದೇ ನ೦ಬಿಕೆಯ ಮೂರ್ತರೂಪ ದೇವರು..ತನ್ನ ಬೆ೦ಬಲಕ್ಕೆ ಯಾರಾದರು ಇದ್ದಾರೆ ಎ೦ಬ ಭಾವನೆಯೇ ಅವನ ಯಶಸ್ಸಿಗೆ ಪರೋಕ್ಷ ಕಾರಣವಾದೀತು...ಈ ನ೦ಬಿಕೆಯೇ ಬಹುಶ ಮನೋಹರನ ಮನಸ್ಸಿನಾಳದ ಸ೦ದೇಶಕ್ಕೆ ಕಾರಣವಿದ್ದೀತು.. ... ನ್(ಆ)ಸ್ಥಿಕ ಎ೦ದರೆ ತಪ್ಪಾಗಲಿಕ್ಕಿಲ್ಲ ಅಲ್ಲವೇ??.... ಗೆಳೆಯಾ ಶೈಲಿ ಉತ್ತಮವಾಗಿದೆ...ಅಭಿನ೦ದನೆಗಳು....

    ReplyDelete
  6. hi.....congrats......your work invokes the true hidden spirits of the readers...

    ReplyDelete
  7. ಸರಿಯಾಗಿ ಹೇಳಿದೆ ಶ್ರೀಹರ್ಷ....ಮನುಷ್ಯ ಮಾನಸಿಕವಾಗಿ ಯಾವಾಗಲೂ ಏಕಾಂಗಿಯೇ...ಮನಸ್ಸಿನ ಎಲ್ಲ ವಿಚಾರಗಳನ್ನ ಎಲ್ಲರೊಂದಿಗೆ ಹಂಚಿಕೊಳ್ಳಲು ಸಾದ್ಯವಿಲ್ಲ...ಅದಕ್ಕಾಗಿ ದೇವರು ಎಂಬ ಗೆಳೆಯನ ಅಗತ್ಯವಿದೆ...ಆ ನಂಬಿಕೆ ಅಷ್ಟೊಂದು ಶಕ್ತಿಶಾಲಿಯಾದಂತದ್ದು...

    ReplyDelete
  8. great job..keep it up...all the best for coming stories..:)))

    ReplyDelete

Post a Comment

Popular posts from this blog

ಹುಡುಕಾಟ

ಸಮಸ್ಯೆ