ಹುಡುಕಾಟ


                    ಕೆಲವು ದಿನಗಳಿಂದ ಬರವಣಿಗೆಯೇ ನಿಂತು ಹೋಗಿತ್ತು . ಬರೆಯಲಿಕ್ಕೆ ಏನೂ ಹೊಳೆಯುತ್ತಲೇ ಇರಲಿಲ್ಲ. ಮಹತ್ವಾಕಾಂಕ್ಷೆಯ ಬ್ಲಾಗ್ ಧೂಳು ಹಿಡಿದಿತ್ತು.  ಅಕ್ಕ ಭಾ ಬೇರೆ ಇತ್ತೀಚಿಗೆ ಏನೂ ಬರಿತಿಲ್ವೇನೂ, ಏನೂ ಸುದ್ದಿ ಇಲ್ಲ ಅಂತಿದ್ದರು. ರೂಮೇಟ್ ಗಳೆಲ್ಲಾ ಬಚಾವ್ ಇವನು ತಲೆ ತಿನ್ನೋದು ತಪ್ಪಿತು ಅಂದುಕೊಂಡಿದ್ದರು.  ಪದೇ ಪದೇ EXAM ಬೇರೆ ಒಂದೆರಡು ಗಂಟೆ ಸುಮ್ಮನೆ ಕೂತು ಯೋಚನೆ ಮಾಡೋಕೆ ಬಿಡುತ್ತಿರಲಿಲ್ಲ. ಇವತ್ತು ಏನಾದ್ರು ಬರಿಲೇ ಬೇಕು ಅಂತ ವಿಷಯ ಹುಡುಕಿಕೊಂಡು ಹೊರಟೆ. ಖಾಲಿ ಮನಸು ಖಾಲಿ ಹಾಳೆ ಎರಡೂ ಜೊತೆಗಿತ್ತು. ಹಳೇ ಪೆನ್ನು ಕಳೆದು ಹೋಯ್ತು. ಹೊಸ ಪೆನ್ನು ““ನೋಡೋಣ ಇವನು ಏನು ಬರಿತಾನೆ’”” ಅಂತ ಜೇಬಲ್ಲಿ ಕುಳಿತಹಾಗಿತ್ತು. ರೂಮಿಂದ ಹೊರ ಬಂದು ಗೇಟ್ ತೆಗೆದು ಗಾಡಿ ತಿರುಗಿಸಿದೆ.  ಛೆ ಗಾಡಿಯಲ್ಲಿ ಹೋದ್ರೆ ಏನು ಸಿಗುತ್ತೆ, ರೀ ಚಳಿ ಗಾಳಿ ಅಷ್ಟೇ, ಅಂತ ಮತ್ತೆ ಲಾಕ್ ಹಾಕಿ ಗೇಟ್ ಮುಚ್ಚಿ ಕಾಲ್ನಡಿಗೆಯಲ್ಲೇ ಸಂಚಾರ ,ವಿಷಯ ಶೋನೆ ಶುರುವಾಯ್ತು.  ದಾರಿಯಲ್ಲಿ ನಮ್ಮ ರೂಂ ಮಾಲಕರು ಗಿಡಗಳಿಗೆ ನೀರು ಹಾಕುತ್ತ ಇದ್ದರು. ಪಕ್ಕದಲ್ಲೇ ಒಂದು ಹಕ್ಕಿ ಹಾರಿತು. “”ಅರೇ ಸನ್ ಬರ್ಡ್.ಇದರ ಗಂಡು ಪ್ರಭೇದ ಎಲ್ಲಿ.ಅದು ನೋಡ್ಲಿಕ್ಕೆ ಸುಪ್ಪರಾಗಿರುತ್ತೆ. ನೀಲಿ ಬಣ್ಣ, ಚುರುಕು ಹಕ್ಕಿ.”” ಅಂತ ಕ್ಯಾಮೆರಕ್ಕಾಗಿ ತಡಕಾಡಿದೆ. ರೂಮಿಗೆ ಹೋಗಿ ಕ್ಯಾಮೆರ ತಂದು ಬಿಡೋಣ ಅಂತ ಒಂದೆರಡು ಹೆಜ್ಜೆ ಹಿಂದೆ ಹಾಕಿದೆ. ಜೋಬಲ್ಲಿದ್ದ ಪೆನ್ನು ಪಿಸು ಪಿಸು ನಗುತ್ತ ಇತ್ತು. ""ನಿನ್ನ ಕತೆ ಇಷ್ಟೇ ಇವತ್ತು . ನನಗೇನೂ ಕೆಲಸವಿಲ್ಲ,ಕ್ಯಾಮರ ಕೈಗೆ ಬಂದ್ರೆ ಮುಗೀತು ,ಕತೆಗೆ ವಿಷಯನೂ ಇಲ್ಲ ಆಲೋಚನೆಗಳೂ ಇಲ್ಲ ಎಂದಿತು. ಹೌದೌದು ಇವತ್ತು ಇವೆಲ್ಲಾ ಬೇಡ ಅಂತ ಮತ್ತೆ ಅದೇ ದಾರಿಯಲ್ಲಿ ಹೊರಟೆ.
                    ಗಂಟೆ ಸುಮಾರು ಐದು ಐದೂವರೆ ಸಂಜೆ. ಮನೆ ಹೆಂಗಸರೆಲ್ಲಾ ಹೊರಗೆ ಬಂದು ಹರಟೆ ಸ್ಟಾರ್ಟ್ ಮಾಡಿದ್ರು. ಪುಟ್ಟ ಪುಟ್ಟ ಮಕ್ಕಳು ಮೈಯೆಲ್ಲಾ ಮಣ್ಣು ಮಾಡಿಕೊಂಡು ಶಾಲೆಯಿಂದ ವಾಪಾಸ್ ಬರುತ್ತಿದ್ದವು. ಕೆಲವು TUTIONಗೆ  ಓಡುತ್ತಿದ್ದವು. ಕೆಲವರದ್ದು ಸಂಜೆಯ ವಾಕಿಂಗ್  ಆಗಲೇ ಶುರುವಾಗಿತ್ತು. ಅಲ್ಲಲ್ಲಿ ಮುದುಕರ ಹರಟೆ ಗುಂಪುಗಳು ಸೇರಿದ್ದವು. ಅಪ್ಪಿ ತಪ್ಪಿ ಒಳಗೆ ಹೋಗಿ ಏನಾದ್ರು ಕುಳಿತರೆ ರಾಜಕೀಯ ಪರಿಣಿತರೇ ಇವರು ಎಂದನಿಸುವ ಹಾಗೆ ಮಾತುಗಳು ಗಾಳಿಯಲ್ಲಿ ಹಾರಾಡುತ್ತಿದ್ದವು. ಎರಡೇ ಎರಡು ದಿನ ರಾಜ್ಯ ಇವರಿಗೆ ಕೊಟ್ಟರೆ ಉದ್ದಾರ ಮಾಡಿ ಮಾರಿ ಬಿಡುತ್ತಾರೇನೋ ಎ೦ಬ ಭಯವಾಯ್ತು.
                   ಸೂರ್ಯ ನ್ನೊಂದರ್ಧ ಗಂಟೆ ಮಾತ್ರ ನಾನು , ಜನವರಿ ಚಳಿ ಬೇರೆ ,.ಬೇಗ ಬೇಗ ಕೆಲಸ ಮುಗಿಸ್ಕೊಂಡು ಹೊರಡಿ ಅಂತಿದ್ದ. ಇನ್ನೊಂದು ಮೂಲೆಯಲ್ಲಿ ಚಂದ್ರ ತನ್ನ ಕೆಲಸಕ್ಕೆ ಒಂದು ಗಂಟೆ ಮುಂಚಿತವಾಗಿ ಬಂದು ಬಿಟ್ಟಿದ್ದ. ದನಕರುಗಳೆಲ್ಲ ವಾಪಸ್ ಮನೆ ಕಡೆ ಹೋಗುತ್ತಿದ್ದವು. ಪಾನಿಪೂರಿ,ಗೋಬಿ ಮಂಚೂರಿ ಅಂಗಡಿಗಳು ತಮ್ಮ ವ್ಯಾಪಾರಕ್ಕೆ ಅಣಿಯಾಗುತ್ತಿದ್ದವು.
                   ಯಾರೋ ಹಿಂಬಾಲಿಸಿದಂತಾಯ್ತು . ತಿರುಗಿ ನೋಡಿದೆ.’’’’’ಗುಡ್ಡು ‘’’’’ನಮ್ಮ ಬೀದಿಯ ಕಾವಲುಗಾರ .ಶ್ವಾನ ಸೇನಾನಿ..ದರಿದ್ರ ನೀ ಹಿಂದೆಯೇ ಬಂದ್ರೆ ಏನೂ ಹೊಳೆಯಲ್ಲ  ಅಂತ “”ಚೂ ಚೂ “””” ಅಂದೆ ..ಎಲ್ಲಿ ಹೋಗಬೇಕು . ಬಾಲ ನ್ನೂ ಜೋರಾಗಿ  ಅಲ್ಲಾಡಿಸುತ್ತಾ ಹಿಂದೆಯೇ ಬರ್ತಾ ಇದೆ . ಬಡ್ಡಿಮಗ ಎರಡು ದಿನ ಬಿಸ್ಕತ್ ಹಾಕಿದ್ದಕ್ಕೆ ಹೀಗೆ ಬೆನ್ನು ಬಿದ್ದಿದೆ. ಕಿಸೆಗೆ ಕೈ ಹಾಕಿದೆ. ಅಯ್ಯೋ ಪರ್ಸ್ ಬೇರೆ ತಂದಿಲ್ಲ. ಪುಣ್ಯಕ್ಕೆ ರೂ ಇತ್ತು. ಪಾರ್ಲೆ ಜಿ ತೊಗೊಂಡು ಪೂರ್ತಿ ಪ್ಯಾಕ್ ಹಸ್ತಾಂತರಿಸಿದೆ. ಅದು ತಿಂತಾ ಇರಬೇಕಾದ್ರೆ ಮೆಲ್ಲ ಎಸ್ಕೇಪ್ ಆದೆ.
                      ಇಷ್ಟೆಲ್ಲಾ ಆದ್ರೂನೂ ನನ್ನ ಪೆನ್ ಮಹಾಶಯರು ಮಾತ್ರ ಆಕಳಿಸುತ್ತಾ ಸುಮ್ಮನೆ ಮಲಗಿಕೊಂಡಿದ್ದರು .  ಏನೋ ಕಡೆ ಕಡೆ ನೋಡಿ ಬರೆಯಲಿಕ್ಕೆವಿಷಯ ಹುಡುಕೋ ಅಂದ್ರೆ ನನ್ನ ಮಗನೆ ನಿದ್ದೆ ಹೊಡಿತಿದಿಯಾ ಅಂತ ಗೊಣಗಿದೆ. ನಿನ್ನನ್ನ ನಂಬಿದ್ರೆ ಆಗಲ್ಲ ಅಂತ ಹಳೇ ಪೆನ್ನನ್ನ ಮಿಸ್ ಮಾಡ್ಕೊತ ಹೊರಟೆ.
                      ಮಕ್ಕಳ ಗುಂಪೊಂದು ಕ್ರಿಕೆಟ್ ಆಡ್ತಾ ಇತ್ತು. ಗಲಾಟೆ ಜಗಳ ನಡೀತಿತ್ತು. ಒಬ್ಬ ೧೫ ರನ್ ಆಯ್ತು ಅಂತ ಇನ್ನೊಬ್ಬ ೧೭ ಅಂತ. ಬಾಲ್ಯದಲ್ಲಿ ನಮಗೂ ಎಷ್ಟು ಕ್ರೀಡೆಯ ಹುಚ್ಚಿತ್ತು  ಅಲ್ವಾ??. ಒಂದ್ಸಲ ರನ್ ಓಡಬೇಕಾದರೆ ಬಿದ್ದು ನಾಲಗೆ ಪಕ್ಕ ಸೀಳಿ ಹೋಗಿತ್ತು. ಅಪರೂಪಕ್ಕೆ ಬ್ಯಾಟಿಂಗ್ ಸಿಕ್ಕಿದ್ರಿಂದ ಒವರಿನ ಉಳಿದ ಬಾಲನ್ನು ಆಡಿಯೇ, ರಕ್ತ ಸುರಿಸುತ್ತಾ ಮನೆ ಕಡೆ ಹೊರಟಿದ್ದೆ.
               ಹಳೆ ನೆನಪುಗಳನ್ನ ಯೋಚಿಸುತ್ತಾ ಮುಂದೆ ಹೋಗುತ್ತಿದ್ದೆ. ಯಾರೋ ತಾತ ಮೊಮ್ಮಗನ ಹಿಡಿದುಕೊಂಡು ಇವ ಮುಂದೆ ಸಾಫ್ಟ್ವೇರ್ ಇಂಜಿನಿಯರ್ ಆಗುತ್ತಾನೆ ಅಂತ ತಮ್ಮ ಗೆಳೆಯನ ಬಳಿ ಅಪೇಕ್ಷೆ ಹೇಳಿಕೊಳ್ಳುತ್ತಿದ್ದರು. ತಾನು ಇಂಜಿನಿಯರ್ ಓದುತ್ತಿರೋದಕ್ಕೂ ಸಾರ್ಥಕವಾಯ್ತು, ತನ್ನ ಓದು ಕೆಲವರ ಜೀವನದ ಹಂಬಲವಾಗಿದೆಯಲ್ಲ ಅನಿಸಿತ್ತು. ನೋವು ಎಂದು ಬಾಗಿದ್ದ ನನ್ನ ಬೆನ್ನು ಹೆಮ್ಮೆಯಿಂದ ಹಾಗೆಯೇ ನೇರವಾಯ್ತು. ನನ್ನ ಶರ್ಟಿನ ಕಾಲರ್ ಅವರ ಮಾತಿಗೋ ಅಥವಾ ಬೀಸುತ್ತಿರುವ ಗಾಳಿಗೋ ಗೊತ್ತಿಲ್ಲ, ತನ್ನ ನಡೆಯೇ ಬದಲಾಯಿಸಿ ಬಿಟ್ಟಿತ್ತು.
              ನಾವು ಮಾಮೂಲಾಗಿ ವಾಕಿಂಗ್ ಬರುತ್ತಿದ್ದ ಅಂತರಿಕ್ಷ ನಗರ ತಲುಪಿದೆ. ಇಸ್ರೋದ ನೌಕರರಿಗಾಗಿ ಸುಸಜ್ಜಿತ ಮನೆಗಳಿದ್ದವು. ದೊಡ್ಡ ದೊಡ್ಡ ಕಾಂಪೌಂಡ್ಗಳಿಂದ ಸುರಕ್ಷತೆ ನೀಡಿದ್ದರು. ವಿಚಿತ್ರ ಅನಿಸಿತು. ಮನುಷ್ಯನ ಗುಣ ನಡತೆ ಶೈಲಿಯಲ್ಲಿ ಎಷ್ಟು ಬದಲಾವಣೆ ನೋಡಿ.....ಕಾಂಪೌಂಡ್ ಒಳಗೆ ಜನ ಹೊಸ ಹೊಸ ಮಾಡರ್ನ್ ಬಟ್ಟೆ ತೊಟ್ಟುಕೊಂಡು,, ಕಾರು ವಾಹನ ಅಂತ ಓಡಾಡುತ್ತಿದ್ದಾರೆ ..ಅವರ , ಮಾತಿನ ಶೈಲಿಯೇ ಬೇರೆ, ನಡೆಯೇ ಬೇರೆ. ಅದೇ ಕಾಂಪೌಂಡ್ ಹೊರಗೆ ಹಳ್ಳಿ ಜನ... ಮಾತೇ ಬೇರೆ ,ಕತೆಯೇ ಬೇರೆ, ಎತ್ತಿನ ಗಾಡಿ ಕುರಿ ಮಂದೆ.
ಯಾವುದು ನಾಗರಿಕತೆಯೋ ಗೊತ್ತಾಗಲಿಲ್ಲ.
ಇದರ ಬಗ್ಗೆ ಬರೆದ್ರೆ ಹೇಗೆ ಅಂತ ಯೋಚನೆ ಮಾಡಿದಾಗ,ಬರಿಬಹುದು ಆದ್ರೆ ಚೆನ್ನಾಗಿರಲ್ಲಅಂತ ಜೇಬಿಂದ ನಮ್ಮ ಪೆನ್ನು ಮಹಾಶಯರು ಮುಖ ತಿರುವಿಕೊಂಡು ಹೇಳಿದ್ರು. ನಿನ್ನನ್ನ ಯಾವ ಉರಿಮುಸುಡಿ ಅಂಗಡಿಯಿಂದ ಕೊಂಡು ಕೊಂಡೆನೋ ಅಂತ ನಿರಾಶೆಯಾಯ್ತು. ಕಿಡಿ ಬೆಂಕಿಯಾಗುವ ಮುಂಚೆಯೇ ,ನೀರು ಸುರಿದು ಬಿಡುತ್ತಾನೆ ಅಂತ ಯೋಚಿಸಿ ಮುಂದೆ ಹೊರಟೆ.
                   ಯಾವುದೋ ಹಳ್ಳಿ ಪ್ರದೇಶ. ಕುರಿ ಮೇಕೆಗಳೆಲ್ಲಾ ಸುಳಿದಾಡುತ್ತಿದ್ದವು . ಜೋಳವನ್ನ ಮನೆ ಮುಂದೆ ಸುರಿದಿದ್ದರು. ಜನ ಯಾವನಿವ ಹೊಸಬ ಅಂತ ಕಣ್ಣು ಪಿಳಿಪಿಳಿಯಾಗಿಸುತ್ತಿದ್ದರು. ಊರ ಕೆರೆ ಹತ್ರ ರಾಶಿ ರಾಶಿ ಶುಂಟಿ ಕ್ಲೀನ್ ಮಾಡಿ ಗೋಣಿಗೆ ತುಂಬಿಸುತ್ತಾ ಇದ್ದರು. ಒಂದ್ಹತ್ತು ನಿಮಿಷ ನೋಡುತ್ತಾ ನಿತ್ಕೊಂಡೆ. ಏನಾದ್ರು ವಿಷಯ ಸಿಗಬಹುದೇನೋ???
ಎಲ್ಲಿಯೋ ಜಗಳ ಘರ್ಷಣೆಯ ಮಾತುಗಳು ಕೇಳಿ ಬಂದವು. ಏನಪ್ಪಾ ಅಂತ ಕಡೆ ಹೋದೆ. ಎರಡು ಹೆಂಗಸರ ಮಧ್ಯೆ ಜಗಳ ನಡೀತಾ ಇತ್ತು. ಒಬ್ಬಳ ಹಸು ಇನ್ನೊಬ್ಬಾಕೆಯ ಅವರೆ ಕಾಳಿ ಫಸಲಿಗೆ ಬಾಯಿ ಹಾಕಿತ್ತು. ಅದಕ್ಕೆ ಬರೋಬ್ಬರಿ ಇಬ್ಬರದೂ ಜಗಳ. ಹಸು ಮಾತ್ರ ತನಗೇನೂ ಅರಿವೇ ಇಲ್ಲ ಎಂಬಂತೆ ತಿನ್ದದನ್ನ ಚಪ್ಪರಿಸುತ್ತಿತ್ತು. "ಯಾಕಮ್ಮ ತಾಯೇ ನೋಡಿಕೊಂಡು ತಿನ್ನಬಾರದೆ, ಈಗ ನೋಡು ಅಂತ ಮನಸಿನಲ್ಲೇ ಹಸುವನ್ನ ಕೇಳಿದೆ. ಅದಕ್ಕೇನು ತಿಳಿಬೇಕು ಪಾಪ.
ಕಲ್ಮುಂಡಿ ,ಬೇವರ್ಸಿ" ಎಂಬಲ್ಲ ಪದಗಳಿಂದ ದಾಳಿ ಆಗುತ್ತಿತ್ತು. ಸ್ವಲ್ಪ ಹೊತ್ತು ನಿಂತರೆ ನನಗೂ ಒಂದೆರಡು ಪದಗಳು ದಾನ ಸಿಗಬಹುದು ಅಂತ ಜಾಗ ಖಾಲಿ ಮಾಡಿದೆ.
                ಆಹಾ ಸೂರ್ಯನ ಸೊಬಗು ,ಭೂಮಿಗೆ ತಾನೆ ಒಡೆಯ ಎಂಬಂತೆ ಮುಳುಗುವ ಹೊತ್ತಿಗೆ ಅರಳಿ ಕುಳಿತಿತ್ತು. ವೃತ್ತಾಕಾರದಿ ಗಾಢ ಕೆಂಪು ಬಣ್ಣ ಕಣ್ಣಿನ ನೋಟ ಬದಲಾಯಿಸಲೇ ಬಿಡುತ್ತಿರಲಿಲ್ಲ.
ಛೆ ....ಕ್ಯಾಮೆರಾನಾದ್ರು ತಂದಿದ್ದರೆ ಒಂದಷ್ಟು ಫೋಟೋನಾದ್ರೂ ಹೊಡ್ಕೊಬೋದಾಗಿತ್ತು. ಈಗ ನೋಡಿದ್ರೆ ಕತೆಗೆ ವಿಷಯನೂ ಇಲ್ಲ ,ಫೋಟೋನೂ ಇಲ್ಲ. ಎಲ್ಲಾ ಪೆನ್ನು ಮಹಾರಾಯನ ಮಾತು ಕಟ್ಕೊಂಡು ಹಾಳಾಗೋಯ್ತು ಅಂತ ಅವನತ್ತ ನೋಡಿದ್ರೆ ,ಮಾರಾಯ ಬಲದಿಕ್ಕಿನತ್ತ ಇಣುಕಿ ಇಣುಕಿ ನೋಡ್ತಿದಾನೆ. ಕಿವಿ ಅಗಲಿಸಿಕೊಂಡು ,ಕಣ್ ಕಣ್ ಬಿಡ್ತಾ ಏನಪ್ಪ ನೋಡುತ್ತಿದ್ದಾನೆ ಅಂತ ಕಡೆ ಹೊರಟೆ.
               ಒಂದು ಗುಡಿ..ತಮಟೆ ,ಡೋಲು ಗಂಟೆ ಶಬ್ದ. ದೇವಿ ಗುಡಿ,,,ಒಂದೆರಡು ಕುರಿಗಳು ,ಕೋಳಿಗಳು ಸಾಲಾಗಿ ನಿಂತದ್ದು ಕಂಡು ಬಲಿಕೊಡೊ ಶಾಸ್ತ್ರ ಇದ್ರೆ ಒಳಗೆ ಹೋಗೊದೇ ಬೇಡ. ಎರಡು ದಿನ ಊಟ ಸೇರಲ್ಲ ಅಂದುಕೊಂಡು ನಿಂತೆ. ಆದ್ರೂ ನಮ್ಮ ಪೆನ್ನು ಮಹಾಶಯನ ಅಪರೂಪದ ಆಸಕ್ತಿ ನೋಡಿ ಏನಾದರೂ ದಕ್ಕಬಹುದೇನೋ ಅಂ ಒಳಗೆ ಹೋದೆ. ಸಣ್ಣ ಮಟ್ಟಿನ ಪೂಜೆಯೋ ಜಾತ್ರೆಯೋ ನಡೆಯುತ್ತಿತ್ತು. ಜನ ಕ್ತಿ ಭಾವದಿಂದ ಗಂಟೆ ಹೊಡೆಯುತ್ತಿದ್ದರು. ಯಾವ ಪೂಜೆ ಏನೋ ಗೊತ್ತಾಗಲಿಲ್ಲ. ಪೂಜೆ ಮಾಡಿಸಿದ ಹಾನುಭಾವ ಒಂದು ಗೋಣಿ ತುಂಬಾ ೧೦೧ ತೆಂಗಿನಕಾಯಿ ತುಂಬಿಸಿಕೊಂಡು ಬಂದು ನೆಲಕ್ಕೆ ಒಡೆಯತೊಡಗಿದ . ದೇವಸ್ತಾನದಲ್ಲಿ ತೆಂಗಿನಕಾಯಿ ಒಡೆಯುವುದು ನಮ್ಮ ಮನಸ್ಸಿನಲ್ಲಿದ್ದ ಗಟ್ಟಿಯಾದ ಕೆಟ್ಟತನವನ್ನ ಒಡೆದು ಸಿಹಿ ನೀರಿನ ರೂಪದಲ್ಲಿ ಒಳ್ಳೆಯತನ ಹರಿಯಬೇಕೆಂದು ಎಂದು ಚಿಕ್ಕವಯಸ್ಸಿನಲ್ಲಿ ಅಪ್ಪ ಹೇಳಿ ಮಾತು ನೆನಪಾಯ್ತು. ಅಯ್ಯೋ ಶಿವನೆ ಮನುಷ್ಯನಲ್ಲಿ ೧೦೧ ತೆಂಗಿನ ಕಾಯಿಯಷ್ಟು ಗಟ್ಟಿ ಕೆಟ್ಟತನವಿದೆಯೇ ಎಂದು ಯೋಚಿಸುತ್ತ ಬಂದ ನಗುವನ್ನ ಹಾಗೆಯೇ ನು೦ಗಿ ಬಿಟ್ಟೆ.
ನನ್ನ ಪೆನ್ನು ಹಾಗೆಯೇ ಬಲಗೈಯನ್ನ ನೂಕಿ ಕಣ್ ಸನ್ನೆ ಮಾಡಿತು. ಏನಪ್ಪ ಅಂತ ನೋಡಿದೆ. ಒಡೆದ ತೆಂಗಿನ ಕಾಯಿಗಳನ್ನ ಯಾರೋ ಎರಡ್ಮೂರು ಹೆಂಗಸರು ತಾ ಮುಂದು ನಾ ಮುಂದು ಎಂಬಂತೆ ಹೆಕ್ಕುತ್ತಿದ್ದರು.
ಛೆ...ಬಡತನ ಎಂದನಿಸಿತು.
ಆತ್ಮಗೌರವ ಅಂದರೆ ಏನು ಎಂಬ ಪ್ರಶ್ನೆ ಮನಸ್ಸಿಗೆ ಕುಕ್ಕಿತು. ಅದರ ಅರ್ಥ ಮನಸ್ಸಿನಿಂದ ಮನಸ್ಸಿಗೆ ,ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತೆ..
ನನ್ನ ಪೆನ್ನು ಇದೇ ಸರಿಯಾದ ವಿಚಾರ ಎಂಬಂತೆ ಸನ್ನೆ ಮಾಡಿತು. ಬೇಗ ಹೋಗಿ ಪೇಪರಿಗೆ ಳಿಸಬೇಕು ಇದನ್ನ ಅಂತ ಹೊರಟೆ. ದಾರಿಯುದ್ದಕ್ಕೂ ಹೇಗೆ ಕತೆ ಶುರು, ಹೇಗೆ ಸಾಗಬೇಕು , ಕೊನೆ ಏನ್  ಅಂತೆಲ್ಲಾ ಯೋಚನೆ ಆಯ್ತು. ರೂಮಿಗೆ ಹೋಗಿ ಯಾರ ಹತ್ರಾನೂ ಮಾತಾಡದೆ ಶುರು  ಮಾಡಿ ಆಯ್ತು. ಹತ್ತು ಹನ್ನೆರಡು ಸಾಲುಗಳು ಸರಾಗವಾಗಿ ಮುಗಿಯಿತು.
ನಗುವ ನಯನ ಧು ಮೌನ ನನ್ನ ಫೋನ್ ರಿಂಗ್ ಆಗ್ಲಿಕ್ಕೆ ಶುರುವಾಯ್ತು. ದರಿದ್ರ ಬೇಕಾದಾಗ ಕಾಲ್ ಬರಲ್ಲ ಅಂತ ಹಲೋ ಅಂದೆ.
ಚಾ... ನಿನ್ನ ಅಸ್ಸೈನ್ಮೆಂಟ್ ಕೊಡೊಅಂತ ಗೆಳೆಯನ ಧ್ವನಿ ಕೇಳಿ ಬಂತು.
ಯಾವುದೊ ಮಾರಾಯ ಅಂದೆ.
ಅದೇ ಕಣೋ VLSI ,೨೬ ಪೇಜ್ ಇದೆಯಂತೆ ,ನಾಳೆನೇ ಸಬ್ಮಿಶನ್ , ಬರ್ದಿಲ್ವಾ, ಬಿಡು ಅಂತ ಫೋನ್ ಕಟ್ ಮಾಡಿದ. .
ಕೆಟ್ತಲ್ಲಪ್ಪ ಕೆಲಸ ,ಕತೆ ಸಾಯ್ಲಿ ರಾತ್ರಿ ಅಸ್ಸೈನ್ಮೆಂಟ್ ಮುಗಿದರೆ ಸಾಕು ಅಂತ ಯೋಚಿಸಿ ಬೆವರಿಳಿತು . ಬೆವರಿನ ಹನಿ ಬರೆದಿದ್ದ ಕತೆ ಸಾಲಿನ ಮೇಲೆ ಬಿದ್ದು ಸುತ್ತ ಇಂಕ್ ಹರಡಿತು. ಟೇಬಲ್ ಮೇಲಿದ್ದ ನನ್ನ ಪೆನ್ನು ಹೊಟ್ಟೆ ಬಿರಿಯುವ ಹಾಗೆ ನಗುತ್ತ ಕೆಳಗೆ ಬಿದ್ದು ಸೊಂಟ ಮುರಿದುಕೊಂಡಿತು.
ಸಾಯಿ...ನನ್ನ ಮಗನೆ ಎಲ್ಲಾ ನಿನ್ನಿಂದಲೇ ಅಂತ ತಲೆ ಮೇಲೆ ಕೈ ಇಟ್ಟೆ ...................
                                                                                                            ಸೂರಜ್ ರಾವ್  

Comments

  1. ವಿವರಣ ಶೈಲಿ ಅದ್ಭುತ ....... ಚೆನ್ನಾಗಿದೆ.......

    ReplyDelete
  2. ಧನ್ಯವಾದಗಳು ಸುದೀಪ್

    ReplyDelete

Post a Comment

Popular posts from this blog

ಸಮಸ್ಯೆ

ಅಸ್ಥಿತ್ವ